ಉರಿಶೀತ-
ಅಲಸಿಕೆ, ಜ್ವರ, ಸ್ನಾಯುಗಳಲ್ಲಿ ನೋವು ಚಳುಕು, ಮೂಗು ಕಟ್ಟುವಿಕೆ, ಕಣ್ಣುರಿ, ತಲೆನೋವು ಇವು ಇದ್ದಕ್ಕಿದ್ದ ಹಾಗೆ ತೋರುವ ವಿಷಕಣದ (ವೈರಸ್) ಬೇನೆ (ಇನ್‍ಫ್ಲೂಯೆಂಜû). ಇದನ್ನು ಫ್ಲೂ ಎನ್ನುವುದೂ ಉಂಟು. ನೆಗಡಿಯ ಪ್ರಭಾವದಿಂದ (ಇನ್‍ಫ್ಲೂಯೆನ್ಸ್) ಇದು ಬರುವುದೆಂದು. ಇನ್‍ಫ್ಲೂಯೆಂಜû ಎಂಬ ಇಟಾಲಿಯನ್ ಪದವನ್ನು ಬಳಸಿದವ ಜನ್ ಹಕ್ಸ್‍ಹ್ಯಾಂ (1743). ಬಿರುಗಾಳಿಗಳು ಉರಿಶೀತವನ್ನು ಹೊತ್ತು ತರುವುವೆಂದು 1890ರ ತನಕ ನಂಬಿಕೆ ಇತ್ತು. ಒಂದಿಷ್ಟು ಕೆಮ್ಮು, ಗಂಟಲ ನೋವು ತೋರಿ, 3-4 ದಿನಗಳಲ್ಲಿ ಇಳಿದು ಹೋಗುವುದೇ ಸಾಮಾನ್ಯ. ಅಷ್ಟಕ್ಕೇ ನಿಲ್ಲದೆ, ರೋಗ ಹೆಚ್ಚಿಕೊಂಡು, ಉಸಿರುನಾಳದ ಉರಿತ (ಟ್ರೆಕಿಯೈಟಿಸ್), ಪುಪ್ಪುಸ ಉರಿತವೂ (ನ್ಯುಮೋನಿಯ) ಆಗಬಹುದು. ಕಂಡೂ ಕಾಣದಂತೆ ಹೋಗುವುದೇ ಸಾಮಾನ್ಯ. ಆದರೆ ನಿಜವಾಗಿಯೂ ರೋಗ ಹತ್ತಿ ಕಾಡಿಸುವುದಕ್ಕಿಂತಲೂ ಹೆಚ್ಚು ಸುಸ್ತು ಮಾಡುತ್ತದೆ.
ಕಾರಣ: ಉರಿಶೀತದ ಎ ಇಲ್ಲವೇ ಬಿ ವಿಷಕಣಗಳೇ ಇದರ ಸಾಮಾನ್ಯ ಕಾರಣ. ಉರಿಶೀತದ ಸಿ ವಿಷಕಣ ಅಷ್ಟು ಜೋರಿನದಲ್ಲ. ಹತ್ತಿದರೂ ಹತ್ತದಂತೆ ಬಂದುಹೋಗುವ ಬಗೆಯದು. ಇದೇ ತೆರನ ಬೇನೆ ಇನ್ನೂ ಹಲವಾರು ವಿಷಕಣಗಳಿಂದಲೂ ಆಗಬಹುದು. ಉರಿಶೀತದ ವಿಷಕಣಗಳು ಇಳೆಗಳ, ಗೋಳಗಳ ಆಕಾರದವು. ಗೋಳಗಳ ಅಡ್ಡಳತೆ 80-100 ಮಿಲಿಮೈಕ್ರಾನುಗಳು. ಇವುಗಳ ಹೊರ ಕವಚದಲ್ಲಿ, ಹಿಟ್ಟು ಸಕ್ಕರೆ, ಪ್ರೋಟೀನು, ಕೊಬ್ಬು, ನಡುವೆ ರೈಬೊನ್ಯೂಕ್ಲೀಯಿಕಾಮ್ಲವೂ ಇರುತ್ತವೆ. ಉರಿಶೀತದ ಎ,ಬಿ ವಿಷಕಣಗಳು ಕೆಲವು ಮುಖ್ಯ ಸಸ್ತನಿಗಳ ಊತಕಗಳಲ್ಲಿ ತಳಿ ಬೆಳೆಸುತ್ತವೆ. ಎ ಬಗೆಯದರಿಂದಾದ ಸೋಂಕಿನಿಂದ ಬಿ ಬಗೆಯೆದುರು ರೋಗ ಮರೆವಣಿ (ಇಮ್ಯೂನಿಟಿ) ಆಗದು. ಆದ್ದರಿಂದ ಎ.ಬಿ ಬಗೆಗಳನ್ನು ಕೆಲವರು ಎರಡೂ ಬೇರೆ ಬೇರೆ ರೋಗಗಳು ಎನ್ನುವರು. ಎ.ಬಿ ತಳಿಗಳಲ್ಲೂ ಎಷ್ಟೋ ವ್ಯತ್ಯಾಸಗಳಿವೆ.

ತುಬ್ಬೆಕ್ಕುಗಳಿಗೂ (ಫೆರೆಟ್ಸ್), ಚಿಟ್ಟಿಲಿಗಳಿಗೂ (ಮೈಸ್) ಮಾನವನ (ಎ, ಬಿ) ವಿಷಕಣಗಳಿಂದ ಉಸಿರ್ನಾಳದ ರೋಗ ಹತ್ತುತ್ತದೆ. ಇದೇ ತೆರನ ಉರಿಶೀತದ ವಿಷಕಣಗಳಿಂದ, ಕುದುರೆ, ಹಂದಿ, ಕೋಳಿಗಳಲ್ಲಿ ಉಸಿರ್ನಾಳ ಬೇನೆ ಹತ್ತುವುದಾದರೂ ಇವು ಮಾನವನನ್ನು ಕಾಡುವಂತೆ ತೋರಿಲ್ಲ. ಆದರೆ, ಹಂದಿಯಲ್ಲಿ ಬರುವ ಉರಿಶೀತ ಮಾನವನ ಬಗೆಯದು. ಹಂದಿಯಲ್ಲಿರುವ ಪರಪಿಂಡಿ (ಪ್ಯಾರಸೈಟ್) ಹುಳುಗಳಲ್ಲಿ ಈ ಸೋಂಕು ಅವಿತಿದ್ದು, ಹಂದಿಯ ನಿಜಗೆಲಸಗಳು (ಫಂಕ್ಷನ್ಸ್) ಏರುಪೇರಾಗುವಾಗ ಹೊರಬಂದು ಹಂದಿಗೆ ಉರಿಶೀತ ಹತ್ತುವುದೆಂದು ಲೆಯ್ಡ್‍ಲಾನ (1936) ಅಭಿಪ್ರಾಯ. ಅಂತೂ ಉಗುಳು. ಸೀನು, ಕೆಮ್ಮು, ನೆಗಡಿ ಕಾಣಿಸಿಕೊಳ್ಳುವ ಮುಂಚಿನ ಮೊದಲ ಒಂದೆರಡು ದಿನಗಳಲ್ಲೇ ರೋಗಿಗಳಿಂದ ಸೋಂಕು ಹತ್ತಿದ, ಉಸಿರಾಟ ಮಂಡಲದಿಂದ ಹೊರಬಿದ್ದ ತುಂತುರುಕಣಗಳು (ಡ್ರಾಪ್ಲೆಟ್ಸ್) ಗಾಳಿಯಲ್ಲಿ ಸೇರಿ, ಈಡಾಗುವ, ತೀರ ಹತ್ತಿರ ಇರುವ ಉಳಿದವರಿಗೆ ಉಸಿರಿನ ಮೂಲಕವೇ ಉರಿಶೀತ ಒಳಹೋಗಬಹುದು. ಸೋಂಕುಗ್ರಸ್ತ ಕೈವಸ್ತ್ರ, ಬಟ್ಟೆಬರೆಗಳಿಂದಲೂ ಹರಡಬಹುದು. ಈ ಕಾರಣದಿಂದಲೇ ಉರಿಶೀತವನ್ನು ತಡೆವ ಯಾವ ನಿರೋಧ ಕ್ರಮಗಳೂ ಕೈಗೂಡವು. ಒಂದು ತಂಡದ ಜನರಲ್ಲಿ ಸಾಮಾನ್ಯವಾಗಿ ಆರೆಂಟು ವಾರಗಳು ಸೊಂಕು ಉಳಿದಿರುವುದು. ಕೆಲವೇ ಮಂದಿ ಕೂಡಿರುವೆಡೆ 1-3 ವಾರಗಳಲ್ಲಿ ಹೋಗುವುದೂ ಉಂಟು. ಆದ್ದರಿಂದ ಬಹುಕಾಲ ಹೊತ್ತು ಹರಡುವವರಿಲ್ಲ. ಸರಿಯಾಗಿ ಗಾಳಿ ಬೆಳಕು ಬಾರದೆಡೆಯ ಗಾಳಿಯಲ್ಲಿ ಸೊಂಕು ಹೆಚ್ಚಾಗಿ ತುಂಬಿರುವುದಾದರೂ ಬಿರುಗಾಳಿಗಳಿಂದ ಉರಿಶೀತ ಎಂದಿಗೂ ಹಬ್ಬದು.

ಚಿಹ್ನೆ, ಲಕ್ಷಣಗಳು: ಬೇನೆ ಹೊರಗಾಣುವ ಮುಂಚಿನ ಕುಮುಲುಕಾಲ (ಇನ್‍ಕ್ಯುಬೇಷನ್ ಪೀರಿಯಡ್) 2-3 ದಿನಗಳು. ಸಾಂಕ್ರಾಮಿಕಗಳಲ್ಲೂ ರೋಗ ಲಕ್ಷಣಗಳು ಹೀಗೆ ಇರುವುವು. ಬಹಳ ಮಂದಿಯಲ್ಲಿ ಬೇನೆ ಸುಮಾರು ಮೂರು ದಿನಗಳು ಕಾಡುವುದು. ಇದ್ದಕ್ಕಿದ್ದ ಹಾಗೆ ಚಳಿ, ನಡುಕ, ತಲೆನೋವು. ಅಲಸಿಕೆ, 38ಲಿ-39ಲಿ ಜ್ವರ, ಕೈಕಾಲುಗಳಲ್ಲಿ ವಿಪರೀತ ನೋವು ಚಳುಕು ಕಾಣುತ್ತವೆ. ಸುಸ್ತು ಮೊದಲಲ್ಲೇ ವಿಪರೀತವಾಗಿರುವುದು. ಆಮೇಲೆ ಕಫವೇ ಬರದ ಒಣಗೆಮ್ಮು ಕಾಣಿಸಿ ಮೂಗು ಕಟ್ಟಿಕೊಂಡೊ ಇಲ್ಲದೆಯೊ ಗಂಟಲು ಉರಿಯುತ್ತದೆ. ಮೊಗದದ್ದರಿಸಿ ಕೆಂಪೇರಬಹುದು. ಕಣ್ಣುರಿಯಾಗಿ ಕೆಲವರಲ್ಲಿ ಕೆಂಪಾಗಾಗಬಹುದು. ಕೆಲವರಲ್ಲಂತೂ ಉರಿಶೀತ ಮೊದಲಿಂದಲೇ ಜೋರಾಗಿರುವುದು. ಉಸಿರಾಟದ ತೊಂದರೆ, ಪುಪ್ಪುಸದ ಬೇನೆ ಮೊದಲೆ ಕಾಣಿಸಿಕೊಳ್ಳುತ್ತವೆ. ರೋಗ ಏರುಪೇರಾಗಿ ಮುಂದೇನು ಎನ್ನಿಸುತ್ತಿರುತ್ತದೆ. ಉಳಿದವರಲ್ಲಿ ಬೇನೆ ತಾಕಿದ್ದೇ ಕಾಣದಂತೆ ಹೋಗುವುದು. ಒಂದೆರಡು ವಾರಗಳು ಕಳೆದ ಮೇಲೆ, ಮಿದುಳು ಬೆನ್ನು ಹುರಿಯುರಿತ (ಎನ್‍ಸೆಫೆಲೊಮಯಲೈಟಿಸ್) ಆಗಬಹುದು.

ಈ ಚಿಹ್ನೆ, ಲಕ್ಷಣಗಳು ಕೆಲವೇ ದಿನಗಳಲ್ಲಿ ಇಳಿದು, ಜ್ವರ ಇಲ್ಲವಾದರೂ ರೋಗಿ ಇನ್ನಷ್ಟು ದಿನಗಳು ಬಲು ನಿತ್ರಾಣದಿಂದಿರುವನು. ಇನ್ನೂ ಒಂದೆರಡು ವಾರಗಳು ರೋಗಿ ಸುಲಭವಾಗಿ ದಣಿದಂತಿರುವನು. ಕೆಲವರಂತೂ ತುಂಬಾ ಸುಸ್ತಾಗಿ ಕುಸಿದು ಬಿದ್ದಿರುವರು. ಕೇವಲ ಒಂದು ದಿನ ಇರುಸುಮುರುಸಾಗಿ ಗಂಟಲು ಕೆರೆತ ಆಗಬಹುದಷ್ಟೇ. ಜ್ವರ ಬಂದರೂ ಗೊತ್ತಿರದಷ್ಟೇ ಇರುವುದು, ಸೋಂಕು ಹತ್ತಿದರೂ ಹೊರಗೆ ತೋರದವರಿಂದಲೇ ಹೆಚ್ಚು ಅಪಾಯ. ಅವರಿಂದ ರೋಗ ಇನ್ನೊಬ್ಬರಿಗೆ ಬೇಗ ಹರಡುತ್ತದೆ. ಸಾಂಕ್ರಾಮಿಕಗಳಲ್ಲಿ 20-25 ಮಂದಿ ಇಂಥವರೇ ಇರಬಹುದು. ಕೆಲವರಲ್ಲಿ ಪುಪ್ಪುಸ ಉರಿತವೇ ಇಲ್ಲದಿರಬಹುದು. ತೀರ ಎಳೆಯರಲ್ಲೂ, ವಯಸ್ಸಾದವರಲ್ಲೂ ಸಿಹಿಮೂತ್ರ, ಗೂರಲು, ಎದೆಗೆಮ್ಮು, ಕ್ಷಯಗಳ ತೆರನ ಉಸಿರಾಟದ, ಗುಂಡಿಗೆಯ ಬೇರೂರಿದ ರೋಗದವರಲ್ಲೂ ಹೀಗಾಗುವುದು ಸಾಮಾನ್ಯ. ಉರಿಶೀತದ ವಿಷಕಣಗಳಿಂದ ಪುಪ್ಪುಸ ಉರಿತ ತೊಡಕಿಗೆಡೆಗೊಡಬಹುದು. ಇತ್ತೀಚೆಗೆ ಕಂಡಂತೆ, ಕೀವುಜನಿಕ ಗುತ್ತಿಕಾಯ್ಜೀವಿಗಳ (ಸ್ಟಫಿಲೊಕಾಕೈ ಪಯೋಜಿನಿಸ್) ತೆರನ ಮರುಚಲದ (ಸೆಕೆಂಡರಿ) ಸೋಂಕು ಹತ್ತಲೂ ಬಹುದು.

ರೋಗದ ರೀತಿ: ಉಸಿರಿನ ಮಂಡಲದಲ್ಲಿ ಬಿದ್ದ ವಿಷಕಣ ಬಾಸೆಗೂಡಿದ ಮೇಲ್ಪೊರೆಯನ್ನು (ಸಿಲಿಯೇಟೆಡ್ ಎಪಿತೀಲಿಯಂ) ಆಯ್ಕೆ ಮಾಡಿದ ಹಾಗೆ ಅಳಿಗೊಳಿಸುವುದು (ನೆಕ್ರೋಸ್) ಮುಖ್ಯ ಲಕ್ಷಣ. ಮೇಲ್ಪೊರೆಯ ಜೀವಕಣಗಳಿಗೆ ಹೀಗೆ ಉರಿಶೀತದಿಂದ ಅಪಾಯವಾದಾಗ ರಕ್ತದಲ್ಲಿನ ದ್ರವ ಹೊರ ಸುರಿದು, ಅಲ್ಲಿನ ಊತಕದಲ್ಲಿ ಉರಿತದ ಬದಲಾವಣೆಗಳಾಗುತ್ತವೆ. ಸೊಂಕು ಮೂಗಿನಲ್ಲಿ ಕಾಲಿಟ್ಟು ಅಲ್ಲೇ ನೆಲೆಸಬಹುದು. ಇಲ್ಲವೇ ಉಸಿರ್ನಾಳಕ್ಕೂ ಇನ್ನೂ ಆಳವಾಗಿಳಿದು ಹರಡಬಹುದು. ಗಂಟಲುರಿತವೂ ಆಗುತ್ತದೆ. ಸೋಂಕು ಹಚ್ಚಿಕೊಂಡಾಗ ಪುಪ್ಫುಸಗಳಿಗೂ ಹರಡಿಕೊಳ್ಳುವುದು. ಪುಪ್ಪುಸುಗಳು ಸೊನೆ (ಎಕ್ಸುಡೇಟ್) ತುಂಬಿಕೊಂಡು ಊದುತ್ತದೆ. ಹೀಗಾದಾಗ ಉರಿಶೀತ ವಿಷಕಣಗಳಿಂದಾದ ಪುಪ್ಪುಸದ ಉರಿತದಿಂದಲೇ ರೋಗಿ ಸಾಯುವುದಾದರೂ ಕೀವುಜನಿಕ ಗುತ್ತಿಕಾಯ್ಜೀವಿಯಿಂದಾದ ಮರುಚಲು ಸೋಂಕಿನ ಪುಪ್ಫುಸ ಉರಿತವೇ ಸಾಮಾನ್ಯ.

ರಕ್ತದಲ್ಲೂ ಒಳಾಂಗಗಳಲ್ಲೂ ಕೆಲವೇಳೆ ಮಿದುಳಲ್ಲೂ ಉರಿಶೀತದ ವಿಷಕಣಗಳು ಕಂದುಬಂದಿದೆ. ಉಳಾಂಗಗಳಿಗೆ ಇವು ಬಂದಿರಬೇಕು. ಪುಪ್ಪಸ ಬಿಟ್ಟು ಇನ್ನೇಲ್ಲಾದರೂ ಕವಂದುಬಂದರೆ, ಅಲ್ಲೂ ನಂಜೇರುವುದನ್ನು ಸೂಚಿಸುತ್ತದೆ.
ನಿದಾನ: ಸಾಂಕ್ರಾಮಿಕಗಳ ಕಾಲದಲ್ಲಿ ರೋಗದ ಲಕ್ಷಣಗಳ ವಿಚಾರವಾಗಿ ಯಾವ ಅನುಮಾನವೂ ಇರದು. ಆದರೂ ಉರಿಶೀತದ್ದೇ ಅಲ್ಲದೆ ಇನ್ನೂ ಬಗೆಬಗೆ ವಿಷಕಣಗಳ ಬೇನೆಗಳೂ ಇದೇ ತೆರನಾಗಿರಬಹುದು. ಆದ್ದರಿಂದ ಅಲ್ಲೊಂದಿಲ್ಲೊಂದು ರೋಗಿಯಲ್ಲಿ ಹೀಗಾಗಿದ್ದರೆ, ಕೇವಲ ರೋಗಿಯ ಪರೀಕ್ಷೆಯಿಂದ ರೋಗದ ನಿದಾನ (ಡಯಗ್ನೋಸಿಸ್) ಖಚಿತವಾಗಲಾರದು. ಸಾಂಕ್ರಾಮಿಕಗಳಲ್ಲಿ ಕೂಡ ಕೆಲವು ರೋಗಿಗಳಿಗೆ ಬೇರೆ ವಿಷಕಣಗಳೇ ಹತ್ತಿರಬಹುದು. ಸಾಮಾನ್ಯ ನೆಗಡಿಯಲ್ಲಿ, ಮೂಗು ಕಟ್ಟಿಕೊಂಡು ನೀರು ಸುರಿಯುತ್ತ ಜ್ವರವಿಲ್ಲದೆಯೂ ಇರಬಹುದು. ಬೇನೆಯ ಮೊದಲ ಒಂದೆರಡು ದಿನಗಳಲ್ಲೇ ಗಂಟಲು, ಬಾಯಿಗಳಿಂದಲೂ ರೋಗಿ ಕೆಲವೇ ದಿನಗಳಲ್ಲಿ ಸತ್ತಿದ್ದರೆ ಉಸಿರ್ನಾಳ, ಪುಪ್ಪುಸಗಳಿಂದಲೋ ತೆಗೆದ ಒರಸುಗಳಿಂದಲೋ (ಸ್ವಾಬ್ಸ್). ಮರುಚಲು ಸೊಂಕಿನಿಂದ ಅಸು ನೀಗಿದ್ದರೆ ವಿಷಕಣ ಸಿಗುವುದು ಇನ್ನೂ ಕಷ್ಟ, ಇದಾವುದೂ ಆಗದಿದ್ದಲ್ಲಿ. ರೋಗಿ ಚೇತರಿಸಿಕೊಳ್ಳುವಾಗ ಅವನ ರಕ್ತದಲ್ಲಿ ಹುಟ್ಟಿರುವ ರೋಧವಸ್ತುಗಳ (ಆಂಟಿಬಾಡೀಸ್) ಮಟ್ಟ ಏರಿರುವುದರಿಂದ ತಿಳಿಯಬಹುದು.
ಈ ವಿಷಕಣವನ್ನು ಬೇರೆ ತೆಗೆದು ಬೆಳೆಸಿ ಪರೀಕ್ಷಿಸಲು ಕಾವಿಗಿಟ್ಟಿರುವ ಮೊಟ್ಟೆಗಳೇ ಸರಿಯೆಂದು ಬರ್ನಲ್ (1939) ತೋರಿಸಿಕೊಟ್ಟ ಅಲ್ಲದೆ, ಉರಿಶೀತದ ವಿಷಕಣಗಳು ಕೋಳಿಮರಿಯ ಕೆಂಪು ರಕ್ತಕಣಗಳನ್ನು ಮುದ್ದೆಗಟ್ಟಿಸುವುದರಿಂದ ಅವನ್ನೂ ಅವುಗಳ ಎದುರಾಗಿ ಬೆಳೆವ ರೋಧವಸ್ತುಗಳನ್ನೂ ಅಳೆಯಲು ಅನುಕೂಲವೆಂದು ಹಸ್ರ್ಟ್, ಮಿದ್ಲಿಲ್‍ಲಾಂಡ್ ಮತ್ತು ಹೆರ್ ಕಂಡುಹಿಡಿದರು. ಪಿಂಡದ ಸುತ್ತಣ ಹೊಕ್ಕುಳುಚೀಲದ (ಅಲ್ಲಂಟಾಯಿಸ್) ದ್ರವದಲ್ಲಿ ಈ ವಿಷಕಣ ಹೇರಳವಾಗಿ ಬೆಳೆಯುವುದೇ ಇದರ ಲಸಿಕೆಯ ತಯಾರಿಕೆಗೆ ಮೂಲ.

ಚಿಕಿತ್ಸೆ: ಸಾಂಕ್ರಾಮಿಕ ತಲೆಹಾಕುವ ಮುಂಚೆಯೇ ಜಡಗೊಳಿಸಿದ ಉರಿಶೀತ ವಿಷಕಣದ ಲಸಿಕೆಗಳನ್ನು ಹಾಕಿದಾಗ ಎಷ್ಟೋ ಕಡೆಗಳಲ್ಲಿ ಒಳ್ಳೆಯದಾಗಿದೆ. ಎರಡು ವಾರಗಳಲ್ಲಿ ಮರೆವಣಿ (ಇಮ್ಯೂನಿಟಿ) ಹೆಚ್ಚಿಕೊಂಡು 4-12 ವಾರಗಳಗಳಲ್ಲಿ ಇಳಿಯುತ್ತ ಹೋಗುವುದು. ಎರಡು ಪ್ರಮಾಣದಲ್ಲಿ (ಡೋಸಸ್) ಒಂದನ್ನು, ಈ ವಿಷಕಣಕ್ಕೆ ಒಡ್ಡಿದ್ದವರಿಗೂ ವರ್ಷದೊಳಗಾಗಿ ಈ ಲಸಿಕೆಯನ್ನು ಹಾಕಿಲ್ಲದವರಿಗೂ ಚುಚ್ಚಿ ಹೊಗಿಸಬೇಕು. ಇದರ ಪ್ರಭಾವ ಸುಮಾರು 12 ತಿಂಗಳು ಮಾತ್ರ ಇರುವುದಾದರೂ ಇದರೊಂದಿಗಿನ ಬೇರೆ ಲಸಿಕೆಗಳಿಂದ ಇದು ಬಲಗೂಡುತ್ತದೆ. ರಷ್ಯದಲ್ಲಿ ಎಲ್ಲೆಲ್ಲೂ ಬಲಗುಂದಿಸಿದ (ಅಟೆನ್ಯುಯೆಟೆಡ್) ಬದುಕಿರುವ ವಿಷಕಣಗಳನ್ನು ಮೂಗಿನ ಮೂಲಕ ಹಾಕುತ್ತಿರುವರು. ಇದನ್ನು ಇನ್ನಾವ ದೇಶಗಳಲ್ಲೂ ಅಷ್ಟಾಗಿ ಬಳಸಿಲ್ಲ. ಇದು ಅನುಕೂಲವಾಗಿ ಕಂಡರೂ ಇನ್ನಷ್ಟು ಪರೀಕ್ಷೆಗಳಿಗೀಡಾಗಬೇಕು. ಮೂಗಿಗೇರಿಸಿದ ಮರವಣಿಕ (ಇಮ್ಯೂನೈಸಿಂಗ್) ಲಸಿಕೆಯಿಂದ (ಸೀರಂ) ರೋಗವನ್ನು ಚೆನ್ನಾಗಿ ತಡೆಗಟ್ಟಿದ ವರದಿಗಳಿದ್ದರೂ ಇನ್ನೂ ಸಾಮಾನ್ಯ ಬಳಕೆಗೆ ಬಂದಿಲ್ಲ. ಲಸಿಕೆಯ ಬಳಕೆಯಲ್ಲಿ ಕೆಲವು ಮಿತಿಗಳಿವೆ. ಒಂದೊಂದು ಸಾಂಕ್ರಾಮಿಕದ ವಿಷಕಣದ ಬಗೆಯ ರಾಸಾಯನಿಕಗಳಲ್ಲೂ ಕೆಲಸ ಮಾಡವು. ಆಯಾ ಸಾಂಕ್ರಾಮಿಕಕ್ಕೆ ಕಾರಣವಾದ ವಿಷಕಣದ ತಳಿಯ ಎದುರಿನ ಬೇರೆ ಗೊತ್ತಾದ ಲಸಿಕೆಯನ್ನು ಆಗಾಗಲೇ ತಯಾರಿಸಬೇಕು. ಅಲ್ಲದೆ, ಸಾಂಕ್ರಾಮಿಕ ತಲೆದೋರುವ ಎಷ್ಟೊ ಮುಂಚೆಯೇ ಇದನ್ನು ಕೊಟ್ಟಿರಬೇಕು. ಸಾಂಕ್ರಾಮಿಕ ನಡುವಣ ಕಾಲಗಳಲ್ಲಿ ಅವನ್ನು ಕೊಡುವುದರಿಂದ ಏನೇನೂ ಫಲವಿಲ್ಲ.

ಮಾನವನಲ್ಲಿ ಕಾಣುವ ಉರಿಶೀತದ ವಿಷಕಣಗಳ ಬಗೆಗಳ ಮೇಲೆಯೆ ಗೊತ್ತಾದ ಪರಿಣಾಮಗಳನ್ನು ತೋರುವ ಯಾವ ರಸಾಯನಿಕ ಇಲ್ಲವೇ ಜೀವಿರೋಧಕವಾಗಲಿ (ಆಂಟಿಬಯೋಟಿಕ್) ಮದ್ದುಗಳಾಗಲಿ ಇಲ್ಲವೇ ಇಲ್ಲ. ಜೀವಿಯಲ್ಲಿ ಚುರುಕಾಗಿ ತೋರುವ ವಸ್ತುವಾದ ಆತಂಕಿ. (ನೋಡಿ- ಇಂಟರ್‍ಫೆರಾನ್) ವಿಷಕಣವನ್ನು ಹಾಕುವ ಮೊದಲೋ ಹಾಕಿದ ಮೇಲೋ ಕೆಲವು ತಾಸುಗಳೊಳಗೂ ಕೇವಲ ಪ್ರಯೋಗಾಲಯದಲ್ಲಿ ಚಟುವಟಿಕೆ ತೋರಿದರೂ ಬೇನೆ ಹತ್ತಿರುವ ರೋಗಿಯಲ್ಲಿ ಇದರ ಕೈವಾಡ ಕಂಡುಬಂದಿಲ್ಲ.
ಕೇವಲ ರೋಗ ಲಕ್ಷಣಗಳ ಶಮನವೊಂದೇ ರೋಗಿಗೆ ಸಿಗುವ ಚಿಕಿತ್ಸೆ. ಸಾಂಕ್ರಾಮಿಕಗಳಲ್ಲಿ ಎಲ್ಲೇ ಆಗಲೀ ಗುಂಪು ಸೇರದಿರಬೇಕು. ರೋಗಿಯನ್ನು ಒಳಕೋಣೆಯಲ್ಲಿ ಬೆಚ್ಚನೆ ಹಾಸಿಗೆಯಲ್ಲಿ ಮಲಗಿಸಿದರೆ, ಲೇಸಲ್ಲದೆ ಬೇಗನೆ ವಾಸಿಯಾಗುವುದು. ಹೆಚ್ಚಿನ ತಾಕುತೊಡಕುಗಳೂ ಇರವು. ಬಹಳ ಮಂದಿಯಲ್ಲಿ ಕೆಲವೇ ದಿನಗಳಲ್ಲಿ ತನಗೆ ತಾನೇ ಇಳಿದುಹೋಗುವುದರಿಂದ, ಮೈ ಕೈಕಾಲುಗಳ ನೋವುಗಳಿಗೂ ಗಂಟಲುರಿಗೂ ನೋವು ಕಳೆದ ಮದ್ದುಗಳನ್ನು ಕೊಟ್ಟರೆ ಸಾಕು. ಪುಪ್ಪುಸ ಉರಿತ ಆಗಿದ್ದರೆ. ಮುಖ್ಯವಾಗಿ ಕೀವುಜನಿಕ ಗುತ್ತಿಕಾಯ್ಜೀವಿಗಳ ಮಾರಕವಾದ ಜೀವಿರೋಧಕಗಳನ್ನು ಹೆಚ್ಚು ಹೆಚ್ಚಾಗಿ ಕೊಡಬೇಕಾಗುತ್ತದೆ. ಕೆಲವೇಳೆ ಹೀಗೆ ಮುಂದಾಗುವುದನ್ನು ತಪ್ಪಿಸಲೂ ಸಲ್ಫೋನೇಮೈಡುಗಳು, ಪೆನಿಸಿಲಿನ್ನುಗಳು, ಸ್ಟ್ರೆಪ್ಟೊಮೈಸಿನುಗಳನ್ನೂ ಕೊಡಬೇಕಾಗಬಹುದು. ಎದೆಗೂಡಲ್ಲೊ ಗುಂಡಿಗೆಯಲ್ಲೊ ಮೊದಲೇ ರೋಗ ಇದ್ದರಂತೂ ತಕ್ಕ ಮದ್ದುಗಳನ್ನು ಕೊಡಲೇಬೇಕು. ಒಂದೆರಡು ವಾರಗಳು ಕಳೆದ ಮೇಲೆ, ಮಿದುಳು, ಬೆನ್ನುಹುರಿಯುರಿತ ಕಂಡರೆ ಕಾರ್ಟಿಕೋಸ್ಟಿರಾಯ್ಡುಗಳನ್ನು ಕೊಟ್ಟೇ ತೀರಬೇಕು.
ಮುನ್ನರಿವು : ಒಂದು ಬಾರಿ ಸೊಂಕು ಹತ್ತಿತೆಂದರೆ, ರೋಗ ತಡೆವ ಬಲ ಎಲ್ಲರಲ್ಲೂ ಒಂದೇ ಸಮನಾಗಿ ಹೆಚ್ಚಿರದಿದ್ದರೂ ಬಹಳ ಮಂದಿಯಲ್ಲಿ ಏರಿರುತ್ತದೆ. ಇದರಿಂದಲೇ ಸಾಂಕ್ರಾಮಿಕಗಳಲ್ಲಿ ನರಳುವವರು ಅಷ್ಟು ಕಡಿಮೆ ಇರುವುದು. ಉರಿಶೀತ ಆಗಾಗ್ಗೆ ಮರುಕಳಿಸುವುದನ್ನು ಕಂಡಾಗ, ಇದರ ಹತೋಟಿ ಸಾಧ್ಯವಿಲ್ಲ ಎನಿಸುತ್ತದೆ. ಕೆಲವೇ ರೋಗಿಗಳಿದ್ದರೆ ಅವರನ್ನು ಕಟ್ಟುನಿಟ್ಟಾಗಿ ಬೇರೆಯಾಗಿ ಇರಿಸಬಹುದು. ಆದರೆ, ಸಾಂಕ್ರಾಮಿಕದಲ್ಲಿ ಇದು ಆಗದ ಕೆಲಸ.

ಗುಂಡಿಗೆ ರೋಗಿಗಳು, ವಯಸ್ಸಾದವರು, ಕೂಸುಗಳನ್ನು ಬಿಟ್ಟರೆ, ಬಹುಮಟ್ಟಿಗೆ ಎಲ್ಲರಲ್ಲೂ ಚೆನ್ನಾಗಿ ವಾಸಿಯಾಗುವುದು. ರಕ್ತನಾಳಗಳ ಗೋಡೆಯ ಮೇಲಿನ ಪ್ರಭಾವದಿಂದಲೋ (ಟಾಕ್ಸಿನ್), ವಿಷಕಣದ ಪ್ರಭಾವದಿಂದಲೇ 24-48 ತಾಸುಗಳಲ್ಲೇ ರೋಗಿ ಸಾಯಬಹುದು. ಮರುಚಲು ಸೊಂಕನ್ನು ಬೇಗನೆ ಗುರುತಿಸಿ ಚಿಕಿತ್ಸೆ ಮಾಡಿದ್ದಾದರೆ ರೋಗಿ ಚೇತರಿಸಿಕೊಳ್ಳಬಹುದು.
ಸಾಂಕ್ರಾಮಿಕ ಉರಿಶೀತ : ಉರಿಶೀತ ಸಾಂಕ್ರಾಮಿಕವಾಗಿ ಬಂದರೆ ಬಲು ಅಪಾಯಕರ, ಸರಕ್ಕನೆ ಕಾಣಿಸಿಕೊಂಡು ಬಹುಬೇಗನೆ ಜನರಲ್ಲಿ 25-40 ಮಂದಿಗೆ ತಾಕುವುದು. ಅಷ್ಟಾಗಿರದೆ, ಅಷ್ಟೇ ಬೇಗನೆ ಹೋಗುವುದು. ಕೆಮ್ಮು, ಉಸಿರಾಟ ಕೆಡಿಸುವುದಕ್ಕಿಂತ ನೋವು, ಸುಸ್ತು ತೊಂದರೆಕೊಡುತ್ತವೆ. ಉರಿಶೀತ ಸಾಂಕ್ರಾಮಿಕ ಆದಾಗಿನ ಹೆಚ್ಚಿನ ತೊಡುಕು, ಉಸಿರಾಟದ ಮಂಡಲದ್ದು. ಕೆಲವರಲ್ಲಿ ಪುಪ್ಪುಸುರಿತ ಮೊದಲೇ ಕಾಣಿಸಿಕೊಳ್ಳುತ್ತದೆ. ಗಾಳಿಕಾಯ್ಜೀವಿ (ನ್ಯೂಮೊಕಾಕೈ), ಗುತ್ತಿಕಾಯ್ಜೀವಿ, ಉರಿಶೀತದ ರಕ್ತಾನುರಾಗಿ (ಹೀಮೊಫಿಲಸ್ ಇನ್‍ಫ್ಲೂಯೆಂಜ), ಮತ್ತಿತರ ಏಕಾಣುಜೀವಿಗಳು ಪುಪ್ಪುಸಕ್ಕೆ ಹತ್ತಬಹುದು. ಪುಪ್ಪುಸ ಉರಿತವಾಗುವುದು ಒಂದೊಂದು ಸಾಂಕ್ರಾಮಿಕದಲ್ಲೂ ಒಂದೊಂದು ಬಗೆ. ಅಲ್ಲದೆ ಉರಿಶೀತದೊಂದಿಗೆ ಏಕಾಣುಜೀವಿಗಳ ಸೋಂಕು ಇದ್ದಷ್ಟೂ ಇದು ಹೆಚ್ಚು. ಮೂಗಿನ ಪಕ್ಕದ ಬಟವೆಯುರಿತ (ಸೈನುಸೈಟಿಸ್), ಒಳಗಿವಿಯುರಿತವೂ (ಓಟೈಟಿಸ್ ಮೀಡಿಯ) ಆಗಬಹುದು. ಬಸುರಿಯರಿಗೆ ಉರಿಶೀತ ತಾಕಿದರೆ, ಎಷ್ಟೋ ಬಾರಿ ಮೈಯಿಳಿವುದು. ಇದರಿಂದ ಬಾಣಂತಿಯರ, ಕೂಸುಗಳ ಸಾವು ಏರುತ್ತದೆ. ಒಂದು ರೀತಿಯಲ್ಲಿ ಉರಿಶೀತ ಬಸುರಿನ ಬಲು ಅಪಾಯಕರ ತೊಡಕು.

ಹಲವಾರು ನಾಡುಗಳಲ್ಲಿ ಒಂದೇ ಬಾರಿಗೆ ತಲೆದೋರುವ, ಇಲ್ಲವೇ ಒಂದು ದೇಶದಲ್ಲಿ ಸಾಂಕ್ರಾಮಿಕವಾಗಿ ತಲೆಹಾಕಿ ಬೇರೆ ದೇಶಗಳಿಗೂ ಹರಡುತ್ತ, ಪ್ರಪಂಚದ ಬಹುಪಾಲು ದೇಶಗಳಲ್ಲಿ ಹಬ್ಬುವುದೇ ಮಹಾಸಾಂಕ್ರಾಮಿಕ (ಪ್ಯಾಂಡೆಮಿಕ್), ಉರಿಶೀತ ಇಂಥ ಒಂದು ಕಾಯಿಲೆ. ಇದರಿಂದಾಗುವ ಸಾವುನೋವುಗಳಂತೂ ಅಪಾರ. ಇದರ ಜೋರೂ ತಾಕುತೊಡಕುಗಳೂ ವಿಪರೀತವಾಗಬಹುದು. ಸಾಂಕ್ರಾಮಿಕಗಳು ಆಗುವ ನಿಜವಾದ ಕಾರಣ ಗೊತ್ತಿಲ್ಲವಾದರೂ 1930ರಿಂದ ಈಚೆಗೆ ಉರಿಶೀತದ ಎ,ಬಿ ವಿಷಕಣಗಳು ರೋಗಕಾರಕಗಳಾಗಿ ಕಂಡಿವೆ.

ಉರಿಶೀತ ಸಾಂಕ್ರಾಮಿಕವಾಗುವುದು ಪುರಾತನ ಕಾಲದಿಂದಲೂ ಹೆಸರಾಗಿದೆ. ಕ್ರಿ.ಪೂ. 5ನೆಯ ಶತಮಾನದಲ್ಲಿ ಹಿಪ್ಪೊಕ್ರೆಟೀಸ್ ಒಂದು ಸಾಂಕ್ರಾಮಿಕವನ್ನು ಉರಿಶೀತವೆಂದು ಹೆಸರಿಟ್ಟರು 1610ರ ಸಾಂಕ್ರಾಮಿಕದಲ್ಲೇ ಮೊದಲು ಸರಿಯಾಗಿ ವರ್ಣಿಸಿದ್ದು. ಆಮೇಲೆ ಬಂದು ಹೋದ ಸಾಂಕ್ರಾಮಿಕಗಳೆಲ್ಲ ಒಂದೇ ತೆರನಾಗಿದ್ದರೂ ಆಗುವ ಕಾಲ, ತೀವ್ರತೆಗಳಲ್ಲಿ ಬೇಕಾದಷ್ಟು ವ್ಯತ್ಯಾಸ ತೋರಿದವು. 1889-90, 1918ರ ಸಾಂಕ್ರಾಮಿಕಗಳ ವಿವರಗಳು ದೊರೆತಿವೆ. ಈ ಸಾಂಕ್ರಾಮಿಕಗಳೆಲ್ಲ ಬಹುಪಾಲು ರಷ್ಯದಲ್ಲಿ ಹುಟ್ಟಿ ಸಂಚಾರ ದಾರಿಗಳ ಮೂಲಕ ಹರಡಿ ಬಂದವೆಂಬ ನಂಬಿಕೆಯಿತ್ತು. ಸಂಚಾರಗಳು ಬರುಬರುತ್ತ ಹೆಚ್ಚಿಸಿಕೊಂಡ ಮೇಲೆ ಯಾವೊಂದು ಮೂಲದಿಂದಲೇ ಆಗಲಿ ಸಾಂಕ್ರಾಮಿಕ ಹುಟ್ಟಿ ಹರಡಿತೆಂದು ಹೇಳುವುದು ಕಷ್ಟವಾಯಿತು. 1918ರ ಸಾಂಕ್ರಾಮಿಕ ಪ್ರಪಂಚದಲ್ಲಿ ಹರಡಿಕೊಂಡ ಕಾಲಕ್ರಮವನ್ನು ಭೂಪಟದ ಚಿತ್ರದಲ್ಲಿ ತಿಂಗಳುಗಳಾಗಿ ಸೂಚಿಸಿದೆ. ಆ ವರ್ಷದ ಹೊತ್ತಿಗೆ ಒಂದೇ ತಿಂಗಳಲ್ಲಿ ಉತ್ತರಾರ್ಧ ಗೋಳವೆಲ್ಲ ಉರಿಶೀತಕ್ಕೆ ಸಿಲುಕಿತ್ತು. ಆಸ್ಟ್ರೇಲಿಯ ತೆರನ ಬಿಡಿಯಾಗಿರುವ ನಾಡುಗಳು ನಿಧಾನವಾಗಿ ಸಿಕ್ಕಿಬಿದ್ದವು. ಸಾಂಕ್ರಾಮಿಕ ಜೋರಾದಾಗ ಬೇಗನೆ ಎಲ್ಲೆಲ್ಲೂ ಕಿಚ್ಚೆಬ್ಬಿಸಿದಂತೆ ಹರಡುವುದು ಇದರಿಂದ ಗೊತ್ತಾಗುತ್ತದೆ. ಮೆಲುಪಿನದಾಗಿದ್ದಾಗಲೂ ಹೀಗೆ ಇರುವುದು.

ಉರಿಶೀತದ ಸಾಂಕ್ರಾಮಿಕ ಜನರಲ್ಲಿ ಬಹಳ ಮಂದಿಯನ್ನು ಕಾಡಿಸುವುದು. ಸಾಮಾನ್ಯ ಸಾಂಕ್ರಾಮಿಕದಲ್ಲಿ ನೂರಕ್ಕೆ 10 ಇದ್ದುದು ಮಹಾಸಾಂಕ್ರಾಮಿಕವಾದಾಗ 30-40ಕ್ಕೆ ಏರಿತು. ಇದು ಬೆಳೆದವರಲ್ಲಿ ಹೆಚ್ಚೆಂದು ತೋರಿದರೂ ಎಳೆಯರಲ್ಲೇ ಹೆಚ್ಚು. ಅಂತೂ ಕಿರಿಯರಲ್ಲೇ ವಿಪರೀತ. ಇಷ್ಟಾದರೂ ಬೇರಾವ ತೊಡಕುಗಳೂ ಹತ್ತದೆ ಕೇವಲ ಇದರಿಂದಲೇ ಸಾಯುವವರು ತೀರ ಕಡಿಮೆ. ಆದರೆ. ಪುಪ್ಪುಸ ಉರಿತದ ತೆರನ ತೊಡಕುಗಳಿಗೆ ಬಲಿಯಾಗುವವರು ಹೆಚ್ಚು. ಗುಂಡಿಗೆಯ, ಮತ್ತಿತರ ರೋಗಗಳಿಂದ ನರಳುವವರಲ್ಲಿ, ಅದರಲ್ಲೂ ವಯಸ್ಸಾದವರಲ್ಲಿ ಇನ್ನೂ ಹೆಚ್ಚು. 1918ರ ಉಗ್ರ ಸಾಂಕ್ರಾಮಿಕದಲ್ಲಿ ಬಲಿಯಾದಷ್ಟು ಮಂದಿ ಪ್ರಪಂಚದಲ್ಲಿ ಇನ್ನೆಂದೂ ಆಗಿಲ್ಲ. ಕೆಲವೇ ತಿಂಗಳಲ್ಲಿ 2 ಕೋಟಿಗೂ ಹೆಚ್ಚು ಮಂದಿ ಬಲಿಯಾದ ಲೆಕ್ಕ ಸಿಕ್ಕಿದೆ. ಇದರ 50 ಪಟ್ಟು ಮಂದಿ ರೋಗದಿಂದ ನರಳಿದರು. ಭಾರತದಲ್ಲೇ 1 ಕೋಟಿ ಜನರು ಅಮೆರಿಕದಲ್ಲಿ 5-48 ಲಕ್ಷ ಮಂದಿ ಸತ್ತರು. 1889-90ರ ಮಹಾಸಾಂಕ್ರಾಮಿಕಕ್ಕೆ ಇದರ ಹತ್ತರಲ್ಲೊಂದು ಪಾಲೂ ಬಲಿಯಾಗಿರಲಿಲ್ಲ.
ಇದು ಚಳಿಗಾಲದಲ್ಲೇ ಬಲು ವಿಶೇಷವಾಗಿ ಬರುವುದಾದರೂ ಸಾಂಕ್ರಾಮಿಕ ಜೋರಾಗಿದ್ದರೆ ಗೊತ್ತಾದ ಕಾಲದಲ್ಲೇ ಬರಬೇಕಿಲ್ಲ. ಚಳಿ ದೇಶಗಳಲ್ಲಿನಂತೆ ಉಷ್ಣವಲಯದಲ್ಲೂ ಅದೇ ಕಾಲಗಳಲ್ಲಿ ಆಗುವುದು. ಒಂದೇ ವರ್ಷದಲ್ಲಿ ಪ್ರಪಂಚದ ದಕ್ಷಿಣಾರ್ಧದಲ್ಲಿ ಒಂದು ಬಾರಿ, ಇನ್ನೊಮ್ಮೆ ಉತ್ತರಾರ್ಧದಲ್ಲಿ ಕಾಣಿಸಿಕೊಳ್ಳುವುದರಿಂದಲೂ ಕೆಲವೆಡೆಗಳಿಗೆ ಮಿತಿಗೊಂಡಿರುವುದರಿಂದಲೂ ಉರಿಶೀತ ಜನರಲ್ಲಿ ಯಾವಾಗಲೂ ಇದ್ದೇ ಇದ್ದು. ಇದಕ್ಕೆ ಈಡಾಗುವ ಮಂದಿ ಬಹಳವಾದಾಗ ಮಾತ್ರ ಸಾಂಕ್ರಾಮಿಕ ಆಗಬಹುದು.
ಉರಿಶೀತದ ಬಿ ವಿಷಕಣದ ಸಾಂಕ್ರಾಮಿಕ 4-5 ವರ್ಷಗಳಿಗೊಮ್ಮೆ ಮರುಕಳಿಸಿ ಎಲ್ಲೆಲ್ಲೂ ಹೆಚ್ಚಾಗಿ ಹರಡಿಕೊಳ್ಳುತ್ತದೆ. ಆದರೆ ಎ ಬಗೆಯದರಷ್ಟು ಬಾರಿ ಕಾಣಿಸಿಕೊಳ್ಳದು. ಇದರಿಂದ ಸಾವೂ ಕಡಿಮೆ. ಕೆಲವು ವರ್ಷಗಳಿಗೊಮ್ಮೆ ಇವೆರಡು ಬಗೆಯವೂ ತಲೆಹಾಕುವುದರಿಂದ, ಮಹಾಸಾಂಕ್ರಾಮಿಕ ಮೂರು ಅಲೆಗಳಲ್ಲಿ ಬರುವುದು ಹೆಚ್ಚಲ್ಲ. ಮೊದಲು 1880-90ರ ಚಳಿಗಾಲದಲ್ಲಿ ಸಾಂಕ್ರಾಮಿಕವಾಗಿ ಬಂದುದು, ಎರಡನೆಯ ಅಲೆ ಇನ್ನೂ ಬಲವಾಗಿ ಒಂದೂಕಾಲು ವರ್ಷಕಾಲ ಬಿಟ್ಟು 1891-92ರ ವಸಂತ ಕಾಲದಲ್ಲಿ ಬಂದರೂ ಅದೇ ಚಳಿಗಾಲದಲ್ಲಿ ಬಂದ ಮೂರನೆಯ ಅಲೆ ಅಷ್ಟು ಜೋರಾಗಿರಲಿಲ್ಲ. ಹಾಗೇ 1918ರ ವಸಂತ. ಬೇಸಗೆ ಕಾಲಗಳಲ್ಲಿ ಪ್ರಪಂಚದಲ್ಲಿ ಎಲ್ಲೆಲ್ಲೂ ಮೆಲುವಾಗಿ ಹರಡಿದ ಸಾಂಕ್ರಾಮಿಕ ಕಳೆದ ಕೂಡಲೆ, ಶರತ್ಕಾಲದಲ್ಲಿ ತುಂಬ ತೀವ್ರತಮವಾಗಿತ್ತು. ಮೊದಲ ಬಾರಿಯ ಸೋಂಕಿನಿಂದ ರೋಗಿಗಳಿಗೆ ರೋಗ ತಡೆವ ಬಲ ಬಂದಿರಬೇಕೆಂಬ ಅನುಮಾನವಿದೆ.
ರಕ್ತದೊಲವಿನ ಉರಿಶೀತಜೀವಿ, ಉರಿಶೀತದ ದಂಡಾಣುಜೀವಿಯನ್ನು (ಬೆಸಿಲಸ್) ರಿಚರ್ಡ್ ಫೇಫರ್ ವರ್ಣಿಸಿದ. ಇದು ಹಲವಾರು ರೂಪಗಳಲ್ಲಿದ್ದು ರಕ್ತದ ಮೇಲೆ ಬದುಕಿರುತ್ತದೆ. ಬಹುಕಾಲ, ಉರಿಶೀತಕ್ಕೆ ಇದೇ ಕಾರಣ ಎಂದಿತ್ತು. 1918ರ ಮಹಾಸಾಂಕ್ರಾಮಿಕದಲ್ಲಿ ಇದರ ಪಾತ್ರ ಮತ್ತೆ ಆಳವಾದ ಪರೀಕ್ಷೆಗೀಡಾಯಿತು. ಉಳಿದವೆಲ್ಲಕ್ಕಿಂತಲೂ ಈ ಏಕಾಣುಜೀವಿಯ ಪಾತ್ರ ಹೆಚ್ಚಿದ್ದರೂ ಇದೇ ಉರಿಶೀತದ ಮೂಲಕಾರಕವಾಗಿ ಕಾಣಲಿಲ್ಲ. ಸೋಸಬಹುದಾದ ವಿಷಕಣ ಕಾರಣ ಇರಬಹುದೆಂಬ ಅಭಿಪ್ರಾಯ ಭದ್ರವಾಯಿತು. ಆಗ ಮುಂದುವರಿದ ದೇಶಗಳೆಲ್ಲೆಲ್ಲ ಈ ಬೇನೆಯನ್ನು ಜನರಿಗೂ ಪ್ರಯೋಗಾಲಯದ ಪ್ರಾಣಿಗಳಿಗೂ ಹತ್ತಿಸುವುದು ಕೈಗೂಡಲಿಲ್ಲ. ಬೇನೆ ಹತ್ತಿದವರಲ್ಲೂ ರೋಗ ಕಾರಣವಾದ ಯಾವ ಜೀವಿಯೂ ಸಿಗಲಿಲ್ಲ. ಆದ್ದರಿಂದ 1918ರ ಸಾಂಕ್ರಾಮಿಕದ ಕಾರಣ ಖಚಿತವಾಗಲಿಲ್ಲ. ಹಂದಿಯಲ್ಲಿ ಉರಿಶೀತಕ್ಕೆ ಕಾರಣವಾಗಿ ಒಂದು ವಿಷಕಣವನ್ನು ತೋರಿಸಿದವ ಅಮೇರಿಕದ ಪೋಪ್ (1931). ಕೊನೆಗೆ ಉರಿಶೀತ ರೋಗಿಗಳ ಗಂಟಲಿಂದ ತೆಗೆದ ವಿಷಕಣಗಳಿಂದ ತುಬ್ಬೆಕ್ಕುಗಳಲ್ಲಿ ಉರಿಶೀತ ಆಗುವುದನ್ನು ಸ್ಮಿತ್, ಆಚಿಡ್ರೂಸ್, ಲೆಯ್ಡ್‍ಲಾ (1933) ಮಾಡಿತೋರಿಸಿದರು. ಚಿಟ್ಟಿಲಿಗಳಿಗೂ ಹತ್ತಿಸಬಹುದೆಂದು ಕಂಡ ಉಳಿದವರೂ ಇದನ್ನು ಸರಿಗಂಡರು. ಇವೆರಡು ಪ್ರಾಣಿಗಳೂ ಸೋಂಕು ವಿಪರೀತವಾದಾಗ ಏಕಾಣುಜೀವಿಯಿಂದಲ್ಲದೆ ಪುಪ್ಪುಸ ಉರಿತದಿಂದ ಸತ್ತವು. ಉಸಿರಲ್ಲಿ ಸೇವಿಸಿದಾಗ ಸೋಂಕು ಹತ್ತಿತು.

ಇತ್ತೀಚಿನ ಸಾಂಕ್ರಾಮಿಕಗಳಲ್ಲಿ, 1933ರಕ್ಕೆ ಉರಿಶೀತದ ಎ ವಿಷಕಣ ಕಾರಣವಾಗಿತ್ತು. ಆಮೇಲೆ, 2-3 ವರ್ಷಗಳಿಗೊಂದು ಬಾರಿ ಇದು ಸಾಂಕ್ರಾಮಿಕ ಆಗುತ್ತಿತ್ತು. ಸಾಂಕ್ರಾಮಿಕಗಳು ಹರಡುವುದು ಒಂದೊಂದು ಬಾರಿಯೂ ಬೇರೆ ಬೇರೆ ಆಗಿತ್ತು. 1936-37, 1940-41ರಲ್ಲಿ ಮಾತ್ರ ಪ್ರಪಂಚದಲ್ಲೆಲ್ಲ ಹಬ್ಬಿತ್ತು. ಚಳಿದೇಶಗಳಲ್ಲಿ ಇದರ ಸಾಂಕ್ರಾಮಿಕಗಳು ಚಳಿಗಾಲದಲ್ಲಿ ಸರಕ್ಕನೆ ಬಂದು ಕೆಲ ದಿನಗಳಿದ್ದು ಹೋಗುತ್ತಿದ್ದವು. ಏನಿಲ್ಲವೆಂದರೂ ಇವುಗಳಲ್ಲಿ ನರಳಿದ ಶೇಕಡಾ ಜನಸಂಖ್ಯೆ 8-15, ಸಾಂಕ್ರಾಮಿಕವಾಗಿ ಹಬ್ಬಿಕೊಳ್ಳುವ ಮೊದಲು ಉರಿಶೀತ ಅಲ್ಲಲ್ಲಿ ಸಣ್ಣದಾಗಿ ತಲೆಹಾಕುತ್ತಿದ್ದುದೂ ಉಂಟು. ಸಾವು ಕೇವಲ ಸಾವಿರಕ್ಕೊಂದು ಇತ್ತು. ಆ ಕಾಲದಲ್ಲಿ ಪುಪ್ಪುಸ ಉರಿತ. ಮತ್ತಿತರ ರೋಗಗಳಿಂದ ಸಾಯುವವರೂ ಹೆಚ್ಚಿದ್ದರು.

1957ರ ಏಪ್ರಿಲಿನಲ್ಲಿ ಹಾಂಕಾಂಗಿನ ನಿರಾಶ್ರಿತರಲ್ಲಿ ಕಾಣಿಸಿಕೊಂಡ ಏಷ್ಯದ ಉರಿಶೀತದ ಸಾಂಕ್ರಾಮಿಕ ಬೇಗನೆ ಎಲ್ಲೆಡೆಗೂ ಹರಡಿ ಜೂನ್ ಹೊತ್ತಿಗೆ ಪ್ರಪಂಚವನ್ನೇ ಸುತ್ತು ಹಾಕಿತು. ಸಾಗಣೆಯ ದಾರಿಗಳಲ್ಲಿ ಇದು ಎದ್ದು ಕಾಣುತ್ತ, ಜನಸಂದಣಿ ಇರುವೆಡೆ ಬಲವಾಗಿತ್ತು. ಸಾಮಾನ್ಯವಾಗಿ ಅಷ್ಟು ಜೋರಿನದಲ್ಲದಿದ್ದರೂ ಉಸಿರಾಟದ ರೋಗಗಳಿಂದ ಹೆಚ್ಚು ಮಂದಿ ಸತ್ತರು. 15-30 ವರ್ಷದವರೇ ಹೆಚ್ಚಾಗಿ ಬಲಿಯಾದವರು. ಪ್ರಪಂಚದಲ್ಲಿ ಎಲ್ಲೆಲ್ಲೂ ಹರಡಿದರೂ ರೋಗ ಬಹಳ ಮಂದಿಗೆ ತಗುಲಿ, ಅಷ್ಟಾಗಿ ಮಾರಕವಾಗಿರಲಿಲ್ಲ. ಉರಿಶೀತ ಹೆಚ್ಚಿದಾಗ ಜನರು ಎಲ್ಲೂ ಗುಂಪು ಸೇರಬಾರದೆಂಬ ಅಂಶ ಆಗ ಸ್ಪಷ್ಟವಾಯಿತು. 1957ರ ಸಾಂಕ್ರಾಮಿಕವನ್ನು ಚೆನ್ನಾಗಿ ಎದುರಿಸಲು ಅಮೆರಿಕದಲ್ಲಿ ಹೆಚ್ಚಿನ ಯತ್ನಗಳಾದವು. ಗೊತ್ತಾದ ಲಸಿಕೆಯನ್ನು ಮೊದಲೆ ಹೇರಳವಾಗಿ ತಯಾರಿಸಿ ಇಟ್ಟುಕೊಂಡಿದ್ದರು. ಒಳ್ಳೆಯ ಬಲವಿರುವ ಲಸಿಕೆ ಹಾಕಿದಾಗ ಶೇಕಡ 80 ಮಂದಿಗೆ ಹತ್ತದಂತೆ ತಡೆಯುವುದು ಸಾಧ್ಯವಾಯಿತು. ರೋಗದಿಂದ ನರಳುವವರ, ಸಾಯುವವರ ಅಂಕಿ ಇಳಿಯಿತು. ಆದರೂ ರೋಗ ಆಗಾಗ್ಗೆ ಸ್ಥುರವಾಗಿ ಗೋಚರಿಸುತ್ತಿದೆ. 

(ನೋಡಿ- ಏಕಾಣುಜೀವಿಕ,-ಸೋಂಕಿನ-ರೋಗಗಳು)
(ನೋಡಿ- ಕೈಗಾರಿಕಾ-ವೈದ್ಯ)
(ನೋಡಿ- ನೆಗಡಿ)
(ಕೆ.ಎಸ್.ಎ.; ಡಿ.ಎಸ್.ಎಸ್.) 
(ಪರಿಷ್ಕರಣೆ: ನಾ. ಸೋಮೆಶ್ವರ)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ